+91 824 243 9895
valored@gmail.com

ಶಿಕ್ಷಣ ಒಂದು ಹಕ್ಕು

ಕಾನೂನಿನಲ್ಲಿ ಅನುಸ್ಥಾಪಿತವಾಗಿರುವ ನಿಯಮದ ಹೊರತಾಗಿ ಯಾವೂದೇ ವ್ಯಕ್ತಿಯು ತನ್ನ ಜೀವನ ಮತ್ತು ವ್ಯಕ್ತಿ ಸ್ವಾತಂತ್ರ್ಯದಿಂದ ವಂಚಿತರಾಗಬಾರದು ಎಂಬುದನ್ನು ಭಾರತ ಸಂವಿಧಾನ ಕಲಂ ೨೧ ರಲ್ಲಿ ಉಲ್ಲೇಖಿಸಲಾಗಿದೆ. ಮಗುವನ್ನು ಉತ್ತಮ ಹಾಗೂ ಜವಬ್ದಾರಿಯುತ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು ಶಿಕ್ಷಣವು ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ಅದ್ದರಿಂದ ಶಿಕ್ಷಣವು ಒಂದು ಪ್ರಮುಖ ಮೂಲಭೂತ ಹಕ್ಕಾಗಿದೆ. ಶಿಕ್ಷಣವು ಮೂಲಭೂತ ಅನಿವಾರ್ಯದ ಜೊತೆಗೆ ಇತರ ಮಾನವ ಹಕ್ಕಿನ ರಕ್ಷಣೆಗೆ ಮತ್ತು ಪೋಷಣೆಗೆ ಬೇಕಾದ ಅವಶ್ಯಕ ಅಂಶವಾಗಿದೆ. ಶಿಕ್ಷಣವು ವೈಯಕ್ತಿಕ ಸ್ವಾತಂತ್ರ್ಯ ಮತ್ತು sಸಬಲೀಕರಣವನ್ನು ರೂಪಿಸಲು ಮತ್ತು ಉತ್ತಮ ಅಭಿವೃಧ್ಧಿ ಫಲಿತಾಂಶವನ್ನು ಪಡೆಯಲು ಶಿಕ್ಷಣವು ಪ್ರೇರಕ ಕ್ತಿಯಾಗಿದೆ. ಇನ್ನೂ ಸಹ ಸುಮಾರು ಮಕ್ಕಳು ಶಿಕ್ಷಣ ಅವಕಾಶದಿಂದ ವಂಚಿತರಾಗಿ ಬಡತನದಿಂದ ಜೀವಿಸುತ್ತಿದ್ದಾರೆ. ಮತ್ತು ಶಿಕ್ಷಣ ಪಡೆಯುವಲ್ಲಿಯೂ ಯಾವೂದೇ ತಾರತಮ್ಯವಿಲ್ಲದೆ ಉತ್ತಮ ಶಿಕ್ಷಣವನ್ನು ಸಂತೋಷದಾಯಕವಾಗಿ ಪಡೆಯಲು ಇನ್ನೂಸಹ ಅಸಾಧ್ಯವಾಗಿದೆ.

ಶಿಕ್ಷಣವು ಒಂದು ಸವಲತ್ತು ಅಲ್ಲ ಅದೊಂದು ಹಕ್ಕು ಶಿಕ್ಷಣವು ಒಂದು ಶಕ್ತಿಯುತ ಸಾಧನವಾಗಿದ್ದು ಒಂದು ದೇಶದ ಪ್ರಗತಿ ಆ ದೇಶದಲ್ಲಿ ದೊರೆಯುವ ಶಿಕ್ಷಣವನ್ನು ಅವಲಂಬಿಸಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಬಡತನದಿಂದ ಮೇಲೆತ್ತಿ ಉತ್ತಮ ಪ್ರಜೆಯಾಗಿ ರೂಪಿಸಲು ಸಹಕಾರಿಯಾಗಿದೆ. ಅಲ್ಲದೆ ವಂಚಿತ ಹಾಗೂ ಸಮಾಜದಲ್ಲಿ ತತ್ತರಿಸುತ್ತಿರುವ ಸಮಾಜದ ಹಲವು ವರ್ಗಗಳ ಆಶಾಕಿರಣವಾಗಿ ಅವರಿಗೆ ಮೌಲ್ಯಯುತ ಶಿಕ್ಷಣ ದೊರೆಯುವುದು ಗಗನಕುಸುಮವಾಗಿದೆ. ಶಿಕ್ಷಣವು ವ್ಯಾಪಾರೀಕರಣದಿಂದಾಗಿ ಸಮಾಜದ ಕಟ್ಟ ಕಡೆಯ ಸಮುದಾಯಕ್ಕೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕಾನ್ನಾಗಿಸುವ ಅನಿವಾರ್ಯತೆ ಇದೆ. ಒಂದು ಪ್ರಜೆಗೆ ಸಂವಿಧಾನವು ಹಲವು ಹಕ್ಕನ್ನು ನೀಡಿದರೂ ಅದರಲ್ಲಿ ಶಿಕ್ಷಣವು ಒಂದು ಭಾಗವಾಗಿರಲಿಲ್ಲ. ಸ್ವಾತಂತ್ರ್ಯೋತ್ತರ ನಂತರದ ಸರಕಾರಗಳೂ ಶಿಕ್ಷಣಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದರೂ ಅದು ಎಲ್ಲರಿಗೂ ತಲುಪುವಲ್ಲಿ ವಿಫಲವಾಗಿದೆ.

ಶಿಕ್ಷಣವು ಎಲ್ಲಾ ಮಕ್ಕಳಿಗೂ ಒಂದು ಬದುಕಿನ ಭಾಗವಾಗಿದೆ. ಅದಕ್ಕಾಗಿ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ೫೪ ಪರಿಚ್ಛೇಧಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಲಾಗಿದೆ.ಇದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಆದರೆ ಅದನ್ನು ಯಥಾವತ್ತು ಜಾರಿಗೊಳಿಸುವಲ್ಲಿ, ಸವಾಲುಗಳನ್ನು ಎದುರಿಸುವಲ್ಲಿ ಸಾಕಷ್ಟು ವಿಫಲತೆಯನ್ನ ಕಂಡಿರುವುದಕ್ಕೆ ಇನ್ನೂ ಸಹ ಸಾಕಷ್ಟು ಮಕ್ಕಳು ಶಾಲೆಯಿಂದ ಹೊರಗಿರುವುದು ಉದಾಹರಣೆಯಾಗಿದೆ.s ಈ ಒಡಂಬಡಿಕೆ ಸುಮಾರು ೨೩ ವರ್ಷ ಸಂದಿದ್ದರೂ ಶಿಕ್ಷಣದಿಂದ ವಂಚಿತರಾಗಿ ಇನ್ನು ಸಹ ಮಕ್ಕಳು ನಾನಾ ಕ್ಷೇತ್ರದಲ್ಲಿ ದುಡಿಯುತ್ತಿರುವುದನ್ನು ಗಮನಿಸಬಹುದು. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸರಕಾರ ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ಬಹಳ ಪ್ರಮುಖವಾದುದು. ಇದು ಮಕ್ಕಳ ಭವಿಷ್ಯ, ಜೀವನಕ್ಕೆ ಕೊಂಡಿಯಾಗಿದೆ. ಈ ಕಾಯಿದೆಯ ಉದ್ದೇಶ ೬ ರಿಂದ ೧೪ ವರ್ಷದ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕಡ್ಡಾಯಗೊಳಿಸಿ ಮತ್ತು ಹಕ್ಕಾನ್ನಾಗಿಸಿದೆ. ಮಾನವ ಹಕ್ಕುಗಳ ಅವಿಭಾಜ್ಯ ಅಂಗವಾದ ಮಕ್ಕಳ ಶಿಕ್ಷಣದ ಹಕ್ಕನ್ನು ಭಾರತದ ಸಂವಿಧಾನವು ಶಿಕ್ಷಣ ಒಂದು ಹಕ್ಕು ಎಂಬುದಾಗಿ ೨೦೦೨ ರಲ್ಲಿ ಕಲಂ ೨೧ ಎ ರೂಪದಲ್ಲಿ ಸೇರ್ಪಡೆಗೊಳಿಸಲಾಯಿತು. ಇದು ಮಕ್ಕಳನ್ನು ವಿವಿಧ ರೀತಿಯ ಶೋಷಣೆ, ಅನ್ಯಾಯ ಹಾಗೂ ದೌರ್ಜನ್ಯಗಳಿಂದ ರಕ್ಷಿಸಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ ಮತ್ತು ಮಕ್ಕಳ ಸಾಗಾಣಿಕೆ ಮತ್ತು ಮಾರಾಟದಂತಹ ಕ್ರೂರ ಸಾಮಾಜಿಕ ಪಿಡುಗುಗಳಿಂದ ರಕ್ಷಿಸುವುದು ಈ ಕಾಯಿದೆಯ ಒಂದು ಮುಖ್ಯ ಆಶಯವಾಗಿದೆ. ಮಕ್ಕಳೆಲ್ಲರೂ ಶಾಲೆಯಲ್ಲಿರುವಂತೆ ಮಾಡುವುದರ ಮೂಲಕ ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ಹತ್ತಿಕ್ಕುವುದು ಹಾಗೂ ಮಕ್ಕಳನ್ನು ಉತ್ತಮ ಹಾಗೂ ಜವಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದೆ ಈ ಕಾಯಿದೆಯ ಆಶಯವೆಂಬುದನ್ನು ಒಪ್ಪಿಕೊಳ್ಳಬೇಕು.

ಈ ಕಾಯಿದೆಯನ್ನು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ಆಗಿದ್ದು ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಈ ಕಾಯಿದೆ ಅನ್ವಯಿಸುತ್ತದೆ. ೬ ರಿಂದ ೧೪ ವರ್ಷದವರೆಗಿನ ಗಂಡು ಅಥವಾ ಹೆಣ್ಣು ಮಗು ೧ನೇ ತರಗತಿಯಿಂದ ೮ನೇ ತರಗತಿವರೆಗಿನ ಶಿಕ್ಷಣ, ಮಾನ್ಯತೆ ಪಡೆದು ಎಲಿಮೆಂಟರಿ ಶಿಕ್ಷಣವನ್ನು ಬೋಧಿಸುತ್ತಿರುವ ಯಾವುದೇ ಶಾಲೆ (ಶಾಲೆಯಿಂದ ದೇಣಿಗೆ ಪಡೆಯುತ್ತಿರುವ ಅಥವಾ ಪಡೆಯದಿರುವ ಶಾಲೆಗಳು) ಯಿಂದ ಪಡೆಯುವುದು. ಅಲ್ಲದೆ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಸ್ಥಳಿಯ ಸರಕಾರಗಳು ತಮ್ಮದೇ ಆದ ಜವಬ್ದಾರಿ ಮತ್ತು ಕರ್ತವ್ಯಗಳನ್ನು ಹೊಂದಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ/ ವರ್ಗ ಇತರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಅಥವಾ ಆರ್ಥಿಕ, ಸಾಮಾಜಿಕ , ಸಾಂಸ್ಕೃತಿಕ, ಭಾಷವಾರು, ಲಿಂಗ ಅಥವಾ ಇನ್ನಿತರ ಯಾವುದೇ ಕಾರಣಗಳಿಂದಾಗಿ ಹಿಂದುಳಿದ ಗುಂಪುಗಳೆಂದು ಸೂಕ್ತ ಸರ್ಕಾರಗಳಿಂದ ಗುರುತಿಸಿರುವ ಗುಂಪುಗಳಿಗೆ ಸೇರಿದ ಮಗು ಕೂಡ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಲೇಬೇಕು ಎಂಬುದು ಈ ಕಾಯಿದೆಯ ಆಶಯ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-೨೦೦೯ ೬ ರಿಂದ ೧೪ ವರ್ಷದ ಎಲ್ಲಾ ಮಕ್ಕಳು ಉಚಿತವಾಗಿ ಅಥವಾ ೮ನೇ ತರಗತಿಯನ್ನು ಪೂರ್ಣಗೊಳಿಸುವ ಶಿಕ್ಷಣವನ್ನು ಪಡೆಯುವಂತಾಗಲು ಸಹಕಾರಿಯಾಗಿದೆ. ಅಲ್ಲದೆ ಮಕ್ಕಳ ಮೇಲೆ ಅಗುತ್ತಿರುವಂತಹ ದೈಹಿಕ ಮತ್ತು ಮಾನಸಿಕ ಹಿಂಸೆಗಳಿಂದ ಮಕ್ಕಳನ್ನು ರಕ್ಷಿಸಿ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಬಲ್ಲದು.

ಕಸ್ತೂರಿ ಬೊಳುವಾರ್

error: Content is protected !!
PADI Valored