+91 824 243 9895
valored@gmail.com

ಅರ್.ಟಿ.ಇ ಕುರಿತು ಕೇಳಲಾದ ಪ್ರಶ್ನೆಗಳು

ಪ್ರಶ್ನೆ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ೨೦೦೯ ಯಾವ ದಿನಾಂಕದಿಂದ ಜಾರಿಗೆ ಬಂದಿದೆ?
ಉತ್ತರ: ೬-೧೪ ವಯೋಮಿತಿಯ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ (೧ ರಿಂದ ೮ನೇ ರಗತಿವರೆಗಿನ) ಶಿಕ್ಷಣವನ್ನು ನೆರೆಹೊರೆಯ ಶಾಲೆಯಲ್ಲಿ ಒದಗಿಸಬೇಕೆಂದು ಕೇಂದ್ರ ಸರ್ಕಾರವು ರೂಪಿಸಿದ ಶಾಸನ (ಕಾಯಿದೆ) ಈ ಕಾಯಿದೆಯು ಭಾರತ ಗಣರಾಜ್ಯದ ೬೦ನೇ ವರ್ಷದಲ್ಲಿ ಸಂಸತ್ತಿನಲ್ಲಿ ಅನುಮೋದನೆಗೊಂಡು ಅಂಗೀಕಾರವಾಗಿ ದಿನಾಂಕ:೨೭.೦೮.೨೦೦೯ ರ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ದಿನಾಂಕ: ೦೧.೦೪.೨೦೧೦ ರಿಂದ ಜಾರಿಗೆ ಬಂದಿರುತ್ತದೆ.

ಪ್ರಶ್ನೆ:ಶಿಕ್ಷಣ ಹಕ್ಕು ಕಾಯಿದೆ ೨೦೦೯ ರ ಕಾಯಿದೆಯ ಪ್ರಕಾರ ಮಗು ಎಂದರೆ ಯಾರು ?
ಉತ್ತರ: ಮಗು ಎಂದರೆ ಆರರಿಂದ ಹದಿನಾಲ್ಕು ವರ್ಷದೊಳಗಿನ ಗಂಡು ಅಥವಾ ಹೆಣ್ಣು ಮಗು.

ಪ್ರಶ್ನೆ:ಈ ಕಾಯಿದೆಯಲ್ಲಿ ಎಷ್ಟು ಅಧ್ಯಾಯ ಮತ್ತು ಎಷ್ಟು ಸೆಕ್ಷನ್‌ಗಳಿವೆ?
ಉತ್ತರ:ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆಯಲ್ಲಿ ೭ ಅಧ್ಯಾಯ ಮತ್ತು ೩೭ ಸೆಕ್ಷನ್‌ಗಳಿವೆ.

ಪ್ರಶ್ನೆ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ೨೦೦೯ ಯಾರ್‍ಯಾರಿಗೆ ಅನ್ವಯವಾಗುತ್ತದೆ?
ಉತ್ತರ: ಈ ಕಾಯಿದೆ ಮತ್ತು ನಿಯಮಾವಳಿಗಳ ಪ್ರಕಾರ ೬ ರಿಂದ ೧೪ ವಯೋಮಿತಿಯ ಎಲ್ಲ ಮಕ್ಕಳು. ತಮ್ಮ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಬಹುದಾಗಿದೆ.

ಪ್ರಶ್ನೆ: ವಯಸ್ಸಿಗೆ ತಕ್ಕ ತರಗತಿ ಶಿಕ್ಷಣದ ಕುರಿತಂತೆ ಕಾಯಿದೆಯು ಏನನ್ನು ಹೇಳುತ್ತದೆ.
ಉತ್ತರ: ಆರು ವರ್ಷ ದಾಟಿದ ಯಾವುದೇ ಮಗು ಶಾಲೆಗೆ ದಾಖಲಾಗದೆ ಇದ್ದ ಪಕ್ಷದಲ್ಲಿ ಅಥವಾ ಶಾಲೆಗೆ ಸೇರಿಸಿದ್ದರೂ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಲು ಆಗದಿದ್ದ ಪಕ್ಷದಲ್ಲಿ ಅಂತಹ ಮಗುವನ್ನು ವಯಸ್ಸಿಗೆ ಸೂಕ್ತವಾದ ತರಗತಿಗೆ ಸೇರಿಸಬೇಕು. ವಯಸ್ಸಿಗೆ ಅನುಗುಣವಾಗಿತರಗತಿಗೆ ಸೇರಿಸಿದ್ದರೂ ತನ್ನ ಇತರ ಸಹಪಾಠಿಗಳೊಂದಿಗೆ ಸಮಾನತೆ ಸಾಧಿಸಲು ನೆರವಾಗಲು ವಿಶೇಷವಾದ ತರಬೇತಿಯನ್ನು ನಿರ್ದಿಷ್ಟ ಸಮಯದಲ್ಲಿ ಹೊಂದುವಂತೆ ಶಿಫಾರಸ್ಸು ಮಾಡಬಹುದು. ಹಾಗೂ ಈ ವಿಧವಾದ ಶಿಕ್ಷಣಕ್ಕೆ ಪ್ರವೇಶ ಹೊಂದಿದ ಮಕ್ಕಳು ತಮ್ಮ ೧೪ ವರ್ಷ ದಾಟಿದ ನಂತರವು ಪ್ರಾಥಮಿಕ ಶಿಕ್ಷಣವನ್ನು ಪೂರ್ತಿ ಮಾಡುವವರೆಗೆ ಉಚಿತ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಪ್ರಶ್ನೆ:ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವಾಗ ವರ್ಗಾವಣೆ ಪತ್ರಗಳಿಲ್ಲದೆ ಇದ್ದಲ್ಲಿ ದಾಖಲಾತಿ ಮಾಡಲು ಕಾಯಿದೆಯಲ್ಲಿ ಅವಕಾಶವಿದೆಯೇ?
ಉತ್ತರ: ಅವಕಾಶ ಇದೆ. ವರ್ಗಾವಣೆ ಪತ್ರವನ್ನು ಪಡೆಯುವಲ್ಲಿ ತಡವಾಗುವುದು ಅಥವಾ ವರ್ಗಾವಣೆ ಪತ್ರವನ್ನು ನೀಡಲು ನಿರಾಕರಿಸುವುದರಿಂದ ಆಗುವ ವಿಳಂಬದ ಕಾರಣದಿಂದ ಮಕ್ಕಳಿಗೆ ಶಾಲೆಗೆ ಪ್ರವೇಶವನ್ನು ನಿರಾಕರಿಸಲಾಗದು. ಹಾಗೆಯೇ ಶಾಲೆಯ ಜವಬ್ದಾರಿ ಹೊಂದಿದ ಶಿಕ್ಷಕರು ಮತ್ತು ಆಡಳಿತ ವ್ಯವಸ್ಥೆ ಕಾರಣವಿಲ್ಲದೆ ವರ್ಗಾವಣೆ ಪತ್ರವನ್ನು ಕೊಡಲು ತಡ ಮಾಡಿದಲ್ಲಿ ಅಂತವರ ಮೇಲೆ ಸೇವಾ ನಿಯಮಗಳಂತೆ ಕ್ರಮ ಕೈಗೊಳ್ಳಬಹುದು. ಹಾಗು ವರ್ಗಾವಣೆ ಪತ್ರವನ್ನು ಮಗುವಿನ ಹೆತ್ತವರ ಹಾಗು ಮಗುವಿನ ಕೈಯಲ್ಲಿ ನೇರವಾಗಿ ಸಂಬಂದಿತ ಶಾಲೆಯು ನೀಡದೆ ನೇರವಾಗಿ ಮಗುವನ್ನು ಶಾಲೆಗೆ ಸೇರಿಸಿ ಮಗು ಹಿಂದೆ ಕಲಿಯುತ್ತಿದ್ದ ಶಾಲೆಯಿಂದ ನೇರವಾಗಿ ವರ್ಗಾವಣೆ ಪತ್ರವನ್ನು ಪಡೆದುಕೊಳ್ಳಬೇಕು.

ಪ್ರಶ್ನೆ: ಶಿಕ್ಷಣ ಹಕ್ಕು ಕಾಯಿದೆಯಲ್ಲಿ ೨೫% ಸೀಟುಗಳನ್ನು ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅವಕಾಶಗಳಿವೆ ಎಂದು ತಿಳಿಯಿತು. ಅದರ ಪ್ರಕಾರ ಪ್ರವೇಶಾತಿಯನ್ನು ಪಡೆಯಲು ಅನುಸರಿಸ ಬೇಕಾದ ಕ್ರಮಗಳೇನು?
ಉತ್ತರ:ಪ್ರತೀ ವರ್ಷವೂ ಶೈಕ್ಷಣಿಕ ವರ್ಷ ಪ್ರಾರಂಭದ ಮೊದಲೆ ರಾಜ್ಯ ಮಟ್ಟದಿಂದಲೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ೨೫% ಮೀಸಲಾತಿ ಆಯೆ ಪ್ರಕ್ರಿಯೆಗೆ ಸಂಬಂದಿಸಿದಂತೆ ಸುತ್ತೋಲೆಯನ್ನು ಹೊರಡಿಸುತ್ತದೆ. ಹಾಗು ಈ ಸುತ್ತೋಲೆಯಂತೆ ಆಯಾಯಾ ತಾಲೂಕಿನ ಕ್ಷೇತ್ರ ಶಿಕ್ಷಣಾದಿಕಾರಿಗಳ ಮೂಲಕ ಅಪೇಕ್ಷೀತ ಪೋಷಕರು ಮಾಹಿತಿ ಪಡೆದುಕೊಂಡು ಆನ್ ಲೈನ್ ಮೂಲಕ ೨೫ % ಸೀಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಸುತ್ತೋಲೆಯಲ್ಲಿ ಸೂಚಿಸಿದ ನಿಯಮಗಳಂತೆ ಆಯ್ಕೆ ಪ್ರಕ್ರಿಯೆಯು ಆಯಾಯಾ ತಾಲೂಕು ಹಂತದಲ್ಲಿ ನಡೆಯುತ್ತದೆ.

ಪ್ರಶ್ನೆ: ೨೫% ಮೀಸಲಾತಿಯಲ್ಲಿ೧೨ (೧) (ಸಿ) ಪ್ರಕಾರ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಅಧಿನಿಯಮದಂತೆ ದಾಖಲಾದ ಮಕ್ಕಳಿಗೆ ತಾರತಮ್ಯ ನೀತಿ ಅನುಸರಿಸಿದರೆ ಏನು ಕ್ರಮ ತೆಗೆದುಕೊಳ್ಳುತ್ತೀರಿ?
ಉತ್ತರ: ಶಿಕ್ಷಣ ಹಕ್ಕು ಕಾಯಿದೆ ೨೦೦೯ ಮತ್ತು ನಿಯಮಗಳು ೨೦೧೨ ರ ೧೨ (೧) (ಸಿ) ಪ್ರಕಾರ ಮೀಸಲಾತಿ ಸೌಲಭ್ಯದಡಿ ದಾಖಲಾದ ಮಕ್ಕಳಿಗೆ ತಾರತಮ್ಯ ಮಾಡಿದಲ್ಲಿ ಸೇವಾ ನಿಯಮದಂತೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಕುರಿತ ಲಿಖಿತ ದೂರನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳವರಿಗೆ ಸಲ್ಲಿಸಬಹುದು. ಹಾಗು ಈ ಹಂತದಲ್ಲಿ ಸಮಂಜಸವೆನಿಸದಿದ್ದಲ್ಲಿ ಸೂಕ್ತ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಪ್ರಶ್ನೆ: ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಶಾಲೆಗೆ ಸೇರಿಸಿದ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಸಂಬಂಧಿಸಿದ ಶಾಲೆಯಲ್ಲಿ ನೀಡುತ್ತಾರೆಯೇ?
ಉತ್ತರ:ಶಾಲಾ ಆಡಳಿತ ಮಂಡಳಿಯು ಪಠ್ಯಪುಸ್ತಕ, ಸಮವಸ್ತ್ರದ ಖರ್ಚನ್ನು ಶಾಲೆಯ ಒಟ್ಟು ವೆಚ್ಚದಲ್ಲಿ ಸೇರಿಸಿದ್ದರೆ, ಆ ಶಾಲೆಯಲ್ಲಿ ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಗೂ ಸಹ ಉಚಿತವಾಗಿ ನೀಡಬೇಕಾಗುತ್ತದೆ.

ಪ್ರಶ್ನೆ:ಈ ಕಾಯಿದೆಯಲ್ಲಿ ಶಾಲೆಗಳು ಕೆಲವು ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ ಹೌದಾ?
ಉತ್ತರ: ಹೌದು. ಎಲ್ಲಾ ಶಾಲೆಗಳು ಸರಕಾರಿ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಮೂಲಭೂತ ಸೌಕರ್ಯ, ಕಲಿಕಾ ವಸ್ತುಗಳು ಮತ್ತು ಉಪಕರಣಗಳು,ತರಬೇತಿ ಹೊಂದಿದ ಶಿಕ್ಷಕರು ಮತ್ತು ನಿರ್ಧರಿತವಾಗಿ ಆದೇಶಿಸಿರುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿ ಅನುಪಾತ ಮತ್ತು ಬೋಧನಾ ಗಂಟೆಗಳು. ಈ ಎಲ್ಲಾ ಸೌಲಭ್ಯಗಳ ಬಗ್ಗೆ ಕಾಯಿದೆಯ ಶೆಡ್ಯೂಲ್ ನಲ್ಲಿ ವಿವರಿಸಲಾಗಿದೆ.

ಪ್ರಶ್ನೆ:ಕೆಲವು ವ್ಯಕ್ತಿಗಳ ಪ್ರಕಾರ ಕಾಯಿದೆಯು ಕೇವಲ ಮಕ್ಕಳ ಹಕ್ಕುಗಳ ಬಗ್ಗೆ ಮಾತ್ರ ಕಾಳಜಿ ಹೊಂದಿದೆ ಎಂದು, ಗುಣಮಟ್ಟದ ಶಿಕ್ಷಣ ಅದರಲ್ಲೂ ಕಲಿಕಾ ಪರಿಣಾಮಗಳ ಬಗ್ಗೆ ಕಡಿಮೆ ಕಾಳಜಿ ಹೊಂದಿದೆ ಎನ್ನಲಾಗಿದೆ. ಹೌದಾ?
ಉತ್ತರ: ಇಲ್ಲ. ಕಾಯಿದೆಯ ಪ್ರಕಾರ ಗುಣಮಟ್ಟದ ಶಿಕ್ಷಣವು ಭಾರತದ ಪ್ರತಿಯೊಂದು ಮಗುವಿನ ಒಂದು ಮೂಲಭೂತ ಹಕ್ಕಾಗಿದೆ, ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಕಾಯಿದೆಯ ಅಧ್ಯಾಯ ೫ ರಲ್ಲಿ ವಿಸ್ತಾರವಾಗಿ ವಿವರಿಸಲಾಗಿದೆ. ಇದು ಶಾಲೆಯ ಸೌಕರ್ಯ, ಸಾಕಷ್ಟು ಸಂಖ್ಯೆಯ ಅರ್ಹಶಿಕ್ಷಕರು, ಪಠ್ಯಕ್ರಮ, ಶಿಕ್ಷಣಶಾಸ್ತ್ರ, ಫಲಿತಾಂಶ, ಮೌಲ್ಯಮಾಪನ, ಶಾಲಾ ಕಾರ್ಯನಿರ್ವಹಣೆಗೆ ಕುರಿತಂತೆ ಮೇಲ್ವಿಚಾರಣೆ ಮಾಡಲು ಶಾಲಾ ನಿರ್ವಹಣಾ ಸಮಿತಿ ರಚನೆಯ ಬಗ್ಗೆ ವಿವರಿಸಲಾಗಿದೆ. ಅದರಲ್ಲೂ ಕಲಿಕಾ ಪರಿಣಾಮಗಳ ಬಗ್ಗೆ ಸಾಕಷ್ಟು ವಿವರಿಸಲಾಗಿದೆ.

ಪ್ರಶ್ನೆ:ಕಾಯಿದೆಯಲ್ಲಿ ಶಿಕ್ಷಕ- ವಿದ್ಯಾರ್ಥಿ ಅನುಪಾತವನ್ನು ಏಕೆ ಶಿಫಾರಸ್ಸು ಮಾಡಲಾಗಿದೆ.?
ಉತ್ತರ: ದೊಡ್ಡ ಪ್ರಮಾಣದ ತರಗತಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಕಡಿಮೆ ಸಂಖ್ಯೆಯ ಶಿಕ್ಷಕರಿಗೆ ಸಾಧ್ಯವಾಗುವುದಿಲ್ಲ ಅದಕ್ಕಾಗಿ ೧-೫ ತರಗತಿಯ ೩೦ ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಮತ್ತು ೬-೮ ನೆ ತರಗತಿಯ ೩೫ ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಅನುಪಾತವನ್ನು ನಿರ್ಧರಿಸಲಾಗಿದೆ.

ಪ್ರಶ್ನೆ:ಕಾಯಿದೆಯಲ್ಲಿ ಆದೇಶಿಸಿರುವಂತೆ ಶಾಲೆಯಲ್ಲಿ ಕೆಲಸದ ಸಮಯ ಎಷ್ಟು ?
ಉತ್ತರ: ೧-೫ ನೆ ತರಗತಿಯವರೆಗೆ ೨೦೦ ದಿನಗಳು ಮತ್ತು ೮೦೦ ಗಂಟೆಗಳ ಬೋಧನಾ ಸಮಯ ಮತ್ತು ೬-೮ ನೇ ತರಗತಿಯವರೆಗೆ ೨೨೦ ದಿನಗಳು ಮತ್ತು ೧೦೦೦ ಗಂಟೆಗಳ ಬೋಧನಾ ಸಮಯವನ್ನು ನಿರ್ಧರಿಸಲಾಗಿದೆ.

ಪ್ರಶ್ನೆ:ಶಿಕ್ಷಕರ ಅರ್ಹತೆಯ ಬಗ್ಗೆ ಕಾಯಿದೆಯಲ್ಲಿ ಏನನ್ನು ಉಲ್ಲೇಖಿಸಲಾಗಿದೆ. ?
ಉತ್ತರ: ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (ಓಅಖಿಇ)ಹೊರಡಿಸಿರುವ ಮಾರ್ಗದರ್ಶಿಯ ಪ್ರಕಾರ ಶಿಕ್ಷಕರ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಈ ಮಾರ್ಗದರ್ಶಿಯ ಪ್ರಕಾರ ಅರ್ಹತೆ ಹೊಂದಿರದ ವ್ಯಕ್ತಿಗಳನ್ನು ಯಾವುದೇ ಶಾಲೆಯು ನೇಮಕ ಮಾಡಿಕೊಳ್ಳದಂತೆ ಕಾಯಿದೆಯು ತಿಳಿಸಿದೆ. ಮತ್ತು ಕಾಯಿದೆ ಜಾರಿಗೆ ಬಂದು ೩ ವರ್ಷಗಳ ಅವಧಿಯೋಲಗೆ ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನುಪೂರ್ತಿಗೊಳಿಸಲು ಅವಕಾಶ ನೀಡಿದೆ.

ಪ್ರಶ್ನೆ:ಶಿಕ್ಷಕರಿಗೆ ಶಾಲಾ ಕರ್ತವ್ಯವನ್ನು ಹೊರತುಪಡಿಸಿ ಇತರ ಸರಕಾರಿ ವಿಶೇಷ(ಶೈಕ್ಷಣಿಕವಲ್ಲದ) ಕರ್ತವ್ಯಗಳಿಗೆ ನಿಗದಿಪಡಿಸುವುದು ಶಿಕ್ಷಕರಿಗೆ ಹೊರೆಯಾಗಿದೆ ಎಂಬ ಮಾತು ರೂಡಿಯಲ್ಲಿದೆ ಅದರೆ ಕಾಯಿದೆಯಲ್ಲಿ ವಿಶೇಷ ಕರ್ತವ್ಯಕ್ಕೆ ನೇಮಿಸಲು ಅವಕಾಶ ನೀಡಲಾಗಿದೆಯೇ?
ಉತ್ತರ: ಯಾವುದೇ ಶಿಕ್ಷಕರನ್ನ ಶೈಕ್ಷಣಿಕವಲ್ಲದ ಕೆಲಸಗಳಿಗೆ, ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ, ವಿಪತ್ತು ನಿರ್ವಹಣೆ, ಸ್ಥಳೀಯ ಸರ್ಕಾರಗಳು, ರಾಜ್ಯ ವಿಧಾನ ಸಭೆ ಮತ್ತು ಸಂಸತ್ತು ಚುನಾವಣೆ ಹೊರತು ಪಡಿಸಿ, ಇತರೆ ಕೆಲಸಗಳಿಗೆ ನೇಮಿಸಬಾರದು.

ಪ್ರಶ್ನೆ:ಶಿಕ್ಷಕರು ಖಾಸಗಿ ಪಾಠ ಮಾಡಲು ಅವಕಾಶ ನೀಡಲಾಗಿದೆಯೇ?
ಉತ್ತರ: ಯಾವುದೇ ಶಿಕ್ಷಕರು ಖಾಸಗಿ ಪಾಠವನ್ನು ಮಾಡುವುದು ಅಥವಾ ಖಾಸಗಿಯಾಗಿ ಕೆಲಸದಲ್ಲಿ ನಿರತರಾಗಬಾರದು ಎಂದು ಕಾಯಿದೆಯು ತಿಳಿಸುತ್ತದೆ.

ಪ್ರಶ್ನೆ:ಈ ಕಾಯಿದೆಯಲ್ಲಿ ಪ್ರತಿ ಶಾಲೆಯು ಶಾಲಾ ಆಡಳಿತ ಸಮಿತಿಯನ್ನು ರಚಿಸುವುದು ಕಡ್ಡಾಯ ಮಾಡಲಾಗಿದೆ. ಯಾಕೆ?
ಉತ್ತರ: ಶಾಲಾ ಆಡಳಿತ ಸಮಿತಿಯು ಹೆತ್ತವರನ್ನು ಒಳಗೊಂಡ ಸಮಿತಿಯಾಗಿದ್ದು ಪ್ರಮುಖವಾಗಿ ಶಾಲೆಯ ಮೇಲ್ವಿಚಾರಣೆ ಮತ್ತು ಶಾಲಾ ಯೋಜನೆಯನ್ನು ಸುಧಾರಿಸುವ ಸಾಮಾರ್ಥ್ಯವನ್ನು ಹೊಂದಿದೆ.

ಪ್ರಶ್ನೆ:ಹೊಸ ಶಾಲೆಯನ್ನು ತೆರೆಯುವ ಕುರಿತು ಈ ಕಾಯಿದೆಯು ಏನನ್ನು ಹೇಳುತ್ತದೆ.?
ಉತ್ತರ: ಸರಕಾರ ಮತ್ತು ಸ್ಥಳೀಯ ಸರಕಾರಗಳು ಸಂಪೂರ್ಣವಾಗಿ ಸ್ವಾಮಿತ್ವವನ್ನು ಹೊಂದಿರುವ ಮತ್ತು ಆರಂಭಿಸಿರುವ ಶಾಲೆಗಳನ್ನು ಹೊರತು ಪಡಿಸಿ ಬೇರೆ ಯಾರೆ ಆಗಲಿ ಈ ಕಾಯಿದೆಯು ಆರಂಭವಾದ ಮೇಲೆ ಸರಕಾರದ ಮನ್ನಣೆಗಾಗಿ ಅರ್ಜಿ ಸಲ್ಲಿಸಿ ಮನ್ನಣೆ ಪಡೆಯಬೇಕು. ಅಂತಹ ಮನ್ನಣೆ ಇಲ್ಲದೆ ಶಾಲೆಗಳನ್ನು ತೆರೆಯುವಂತಿಲ್ಲ.

ಪ್ರಶ್ನೆ:ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ ಮಗುವಿನ ವಯಸ್ಸನ್ನು ನಿರ್ಧರಿಸುವ ಪ್ರಮಾಣ ಪತ್ರ ಇಲ್ಲದೆ ಇದ್ದರೆ ಶಾಲೆಗೆ ದಾಖಲು ಮಾಡಬಹುದಾ?
ಉತ್ತರ:ಕಾಯಿದೆಯು ಉಲ್ಲೆಖಿಸಿರುವಂತೆ ಮಗುವಿನ ವಯಸ್ಸನ್ನು ನಿರ್ಧರಿಸುವ ಪ್ರಮಾಣ ಪತ್ರ ಲಭ್ಯವಿಲ್ಲದೆ ಇದ್ದರೆ ಯಾವುದೇ ಮಗುವಿಗೆ ಶಾಲಾ ಪ್ರವೇಶವನ್ನು ನಿರಾಕರಿಸುವಂತಿಲ್ಲ.

ಪ್ರಶ್ನೆ:ಮಗುವಿನ ಉತ್ತಿರ್ಣತೆ ಮತ್ತು ಕಲಿಕೆಗೆಸಂಬಂದಿಸಿದಂತೆ ಕಾಯಿದೆಯು ಏನನ್ನು ಹೇಳುತ್ತದೆ?
ಉತ್ತರ:ಯಾವುದೇ ಮಗುವನ್ನು ಯಾವುದೇ ಕಾರಣಕ್ಕೂ ತರಗತಿಯಲ್ಲಿ ನಪಾಸು ಮಾಡಿ ಉಳಿಸಿಕೊಳ್ಳುವಂತಿಲ್ಲ ಮತ್ತು ಎಲಿಮೆಂಟರಿ ಶಿಕ್ಷಣ ಪೂರೈಸುವ ತನಕ ಶಾಲೆಯಿಂದ ಹೊರಹಾಕುವಂತಿಲ್ಲ. ಹಾಗೂ ಯಾವುದೇ ಮಗುವಿಗೆ ದೈಹಿಕ ಶಿಕ್ಷೆ ಅಥವಾ ಮಾನಸಿಕ ಶೋಭೆಗೆ ಗುರಿ ಮಾಡಬಾರದು.

ಪ್ರಶ್ನೆ:ಪಠ್ಯಕ್ರಮ ಮತ್ತು ಮೌಲ್ಯಮಾಪನ ಪ್ರಕ್ರೀಯೆಗಳ ಬಗ್ಗೆ ಕಾಯಿದೆಯಲ್ಲಿ ಏನನ್ನು ಹೇಳಲಾಗಿದೆ.?
ಉತ್ತರ:ಎಲಿಮೆಂಟರಿ ಶಿಕ್ಷಣದ ಪಟ್ಯ ಮತ್ತು ಮೌಲ್ಯಮಾಪನದ ಪ್ರಕ್ರೀಯೆಯನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದ ಶೈಕ್ಷಣಿಕ ಪ್ರಾಧಿಕಾರವು ನಿರ್ಧರಿಸುತ್ತದೆ. ಮತ್ತು ಕಾಯಿದೆಯ ಸೆಕ್ಷನ್ ೨೯ ರ ಪ್ರಕಾರ ಪಠ್ಯ ಮತ್ತು ಮೌಲ್ಯ ಮಾಪನ ಪ್ರಕ್ರೀಯೆಗಳ ವಿಧಿವಿಧಾನಗಳನ್ನು ನಿರ್ಮಿಸುವಾಗ ಈ ಕೆಳಗಿನವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
ಶಿಕ್ಷಣವು ಸಂವಿಧಾನವು ಎತ್ತಿಹಿಡಿದಿರುವ ಮೌಲ್ಯಗಳಿಗೆ ಅನುಗುಣವಾಗಿರಬೇಕು.
ಶಿಕ್ಷಣವು ಮಕ್ಕಳ ಸರ್ವಾಂಗೀಣ ಅಭಿವೃದ್ದಿ
ಶಿಕ್ಷಣವು ಮಕ್ಕಳ ಜ್ಙಾನ, ಸಾiರ್ಥ್ಯಮತ್ತು ನೈಪುಣ್ಯತೆಗಳ ಬೆಳವಣಿಗೆ.
ಶಿಕ್ಷಣವು ಪೂರ್ಣ ಪ್ರಮಾಣದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಬೆಳವಣಿಗೆ.
ಶಿಕ್ಷಣವು ಮಕ್ಕಳ ಸ್ನೇಹಿ ಮತ್ತು ಮಕ್ಕಳ ಕೇಂದ್ರಿಕೃತ ಮಾದರಿಯಲ್ಲಿ ಚಟುವಟಿಕೆಗಳ ಮೂಲಕ ಪರಿಶೋಧನೆ ಮತ್ತು ಕಂಡುಕೊಳ್ಳುವ ವಿಧಾನದಲ್ಲಿ ಕಲಿಕೆ.
ಶಿಕ್ಷಣವು ಬೋಧನಾ ಮಾಧ್ಯಮ ಸಾಧ್ಯವಾದಷ್ಟು ಮಟ್ಟಿಗೆ ಮಕ್ಕಳ ಮಾತೃಭಾಷೆಯಲ್ಲಿರಬೇಕು.
ಶಿಕ್ಷಣವು ಮಕ್ಕಳನ್ನು ಭೀತಿ, ನೋವು, ಮಾನಸಿಕ ಕ್ಷೆಭೆಯಿಂದ ಮುಕ್ತರಾನ್ನಾಗಿ ಮಾಡುವುದು, ಮತ್ತು ಮಕ್ಕಳು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಹಾಯ ಮಾಡುವುದು.
ಶಿಕ್ಷಣವು ಮಗುವಿನ ಗ್ರಹಿಕೆಯ ಮಟ್ಟ ಮತ್ತು ಅದನ್ನು ಅಳವಡಿಸುವ ಸಾಮರ್ಥ್ಯ ಕುರಿತು ಅದನ್ನು ಅಳವಡಿಸುವ ಕುರಿತು ಸಮಗ್ರ ಹಾಗೂ ನಿರಂತರ ಮೌಲ್ಯಮಾಪನ
ಶಿಕ್ಷಣವು ಯಾವುದೇ ಮಗು ಎಲಿಮೆಂಟರಿ ಶಿಕ್ಷಣವನ್ನು ಪೂರ್ಣಗೊಳಿಸುವ ತನಕ ಯಾವುದೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದ ಅವಶ್ಯಕತೆ ಇಲ್ಲ.

error: Content is protected !!
PADI Valored